ಬಣ್ಣ ಬಣ್ಣದ ರಂಗೋಲಿಯ ಮೂಲಕ ಮತದಾನ ಜಾಗೃತಿ
ಶಿಡ್ಲಘಟ್ಟ ತಾಲ್ಲೂಕಿನ ನೈತಿಕ ಹಾಗೂ ಕಡ್ಡಾಯ ಮತದಾನದ ಜತೆಗೆ ಮತದಾನ ಪ್ರಮಾಣ ಹೆಚ್ಚಳಕ್ಕೆ ನಾನಾ ರೀತಿಯ ವಿನೂತನ ಕಾರ್ಯಕ್ರಮಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಸ್ವೀಪ್ ಸಮಿತಿಯು ವಿಶಿಷ್ಟ ರೀತಿಯಲ್ಲಿ ರೂಪಿಸುತ್ತಿದೆ.
ಸ್ವೀಪ್ ಸಮಿತಿ ವತಿಯಿಂದ ನಗರದ ರೈಲ್ವೆ ನಿಲ್ದಾಣದ ಬಳಿ ರಂಗು ರಂಗಿನ ಸುಂದರ ರಂಗೋಲಿಯ ಜೊತೆಗೆ ಮತದಾನ ಕುರಿತ ಘೋಷ ವಾಕ್ಯವನ್ನು ಬಿಡಿಸುವ ಮೂಲಕ ವಿಧಾನಸಭಾ ಕ್ಷೇತ್ರದ ಜನರಿಗೆ ಮತದಾನದ ಅರಿವು ಮೂಡಿಸಲಾಯಿತು. “ಮತದಾನಕ್ಕಿಂತ ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ”, "ನನ್ನ ಮತ, ನನ್ನ ಹಕ್ಕು", "ನಾನು ತಪ್ಪದೇ ಮತದಾನ ಮಾಡುತ್ತೇನೆ" ಎಂಬ ಚುನಾವಣಾ ಘೋಷವಾಕ್ಯವನ್ನು ರಂಗೋಲಿಯ ಜೊತೆಗೆ ಬರೆಯುವುದರ ಮೂಲಕ ನವೀನ ರೀತಿಯಲ್ಲಿ ಸಾರ್ವಜನಿಕರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲು ಹಾಗೂ ಮತದಾನದ ದಿನದಂದು ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಲು ಜಾಗೃತಿ ಮೂಡಿಸಲು ಅಗತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿಯವರಾದ ಮುನಿರಾಜು ಮಾತನಾಡಿ, ಮತದಾನದ ಜಾಗೃತಿ ಮೂಡಿಸುವಲ್ಲಿ ಮಹಿಳೆಯ ಪಾತ್ರ ಮಹತ್ವವಾಗಿದ್ದು. ಸುಮಾರು 100 ಮಹಿಳೆಯರಿಗಿಂತ ಹೆಚ್ಚಿಗೆ ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಪ್ರಮುಖವಾಗಿ ಮಹಿಳೆಯರು ಜಾಗೃತರಾಗಿ ಮತದಾನ ಮಾಡುವುದರ ಜತೆಗೆ, ಪ್ರತಿಯೊಬ್ಬರಲ್ಲಿ ಮತದಾನದ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ. ಹಾಗಾಗಿ, ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಿ ಎಂದು ಕರೆ ನೀಡಿದರು.
ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಶಿಡ್ಲಘಟ್ಟ ತಾಲ್ಲೂಕು ಇವರ ಸಹಯೋಗದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮಮತ ತಲಕಾಯಲಬೆಟ್ಟ, ದ್ವಿತೀಯ ಸ್ಥಾನ ಕೃತಿಕಾ, ತೃತೀಯ ಸ್ಥಾನ ನಾಗರತ್ನ ರವರಿಗೆ ಸ್ವೀಪ್ ಜಾಗೃತಿ ಪ್ರಮಾಣ ಪತ್ರ, ಮೇಡಲ್, ಕ್ಯಾಪ್ ಹಾಗೂ ಬಹುಮಾನ ವಿತರಿಸಲಾಯಿತು. ಮತದಾನ ಜಾಗೃತಿಗಾಗಿ ರಂಗೋಲಿ ಸ್ಪರ್ಧೆ, ಮೇ ಹತ್ತು - ಓಟು ಒತ್ತು, ನಿಮ್ಮ ಆಯ್ಕೆ, ನಿಮ್ಮ ಭವಿಷ್ಯಕ್ಕಾಗಿ ಎಂಬುವುದರ ಬಗ್ಗೆ ಮಾಹಿತಿ ತಿಳಿಸುವಂತಿತ್ತು.
ಈ ಸಂದರ್ಭದಲ್ಲಿ ತಾಲ್ಲೂಕು ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯಾದ ಮುನಿರಾಜು, ತಾಲ್ಲೂಕು ಚುನಾವಣಾಧಿಕಾರಿ ಜಾವಿದ ನಸೀಮಾ ಖಾನಮ್, ನಗರಸಭೆ ಕಮಿಷನರ್ ಶ್ರೀನಾಥ್, CDPO ನೌತಾಜ್, ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸುಬ್ಬಾರೆಡ್ಡಿ, ತಾಲ್ಲೂಕು ನರೇಗಾ ಸಂಯೋಜಕರಾದ ಲೋಕೇಶ್, ಎನ್ ಆರ್ ಎಲ್ ಎಂ ತಂಡದವರು ಹಾಗೂ ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.
Comments
Post a Comment